
ಇ–ಬೆಳಗಾವಿ ಎಫೆಕ್ಟ್
ಅನಗೋಳ ಕ್ರಾಸ್ ಕಟ್ಟಡಕ್ಕೆ ಪಾಲಿಕೆ ‘ನೋಟಿಸ್ ಬಿಸಿ’!
ಬೆಳಗಾವಿ:
ನಗರದ ಅನಗೋಳ ಕ್ರಾಸ್ ಪ್ರದೇಶದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಇದೀಗ ಪಾಲಿಕೆಯ ಕಣ್ಣಿಗೆ ಬಿದ್ದಿದೆ.
ಮಂಜೂರಾದ ಕಟ್ಟಡ ಪರವಾನಿಗೆ ಹಾಗೂ ಅನುಮೋದಿತ ನಕ್ಷೆ ಮೀರಿ ಕಾಮಗಾರಿ ನಡೆದಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಕಟ್ಟಡ ಮಾಲೀಕರು ಮತ್ತು ತಾಂತ್ರಿಕ ಮೇಲ್ವಿಚಾರಕರಿಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಿದೆ.
‘ಇ–ಬೆಳಗಾವಿ’ ಈ ವಿಷಯವನ್ನು ಸಾರ್ವಜನಿಕ ಚರ್ಚೆಗೆ ತಂದ ಬೆನ್ನಲ್ಲೇ ಪಾಲಿಕೆ ಚುರುಕಾಗಿದೆ ಎಂಬುದು ಗಮನಾರ್ಹ.

ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಅನುಮೋದಿತ ನಕ್ಷೆಯಲ್ಲಿ ತೋರಿಸಿದಂತೆ ಸೆಟ್ಬ್ಯಾಕ್ ಜಾಗ ಬಿಡದೆ ಕಾಮಗಾರಿ ಮುಂದುವರಿದಿರುವುದು ಕಂಡುಬಂದಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಪಾಲಿಕೆ ದಾಖಲೆಗಳ ಪ್ರಕಾರ, ಈ ಕಟ್ಟಡಕ್ಕೆ ಬೇಸ್ಮೆಂಟ್, ನೆಲಮಹಡಿ ಹಾಗೂ ನಾಲ್ಕು ಮಹಡಿಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. 2025ರ ಅಕ್ಟೋಬರ್ 18ರಂದು ಪರವಾನಿಗೆಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, 2025ರ ಡಿಸೆಂಬರ್ 8ರಂದು ಅನುಮತಿ ನೀಡಲಾಗಿದೆ.

ಆದರೆ, 2026ರ ಏಪ್ರಿಲ್ 27 ಮತ್ತು 28ರಂದು ನಡೆದ ಸ್ಥಳ ಪರಿಶೀಲನೆಯಲ್ಲಿ, ಮಂಜೂರಾದ ನಕ್ಷೆಗೆ ವಿರುದ್ಧವಾಗಿ ಬೇಸ್ಮೆಂಟ್ ಭಾಗ ಮತ್ತು ಮುಂಭಾಗದ ನಿರ್ಮಾಣ ನಡೆದಿದೆ ಎಂಬ ಆಕ್ಷೇಪ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ, 24 ಗಂಟೆಯೊಳಗೆ ನಿಯಮಬಾಹಿರ ಕಾಮಗಾರಿಯನ್ನು ತೆರವುಗೊಳಿಸಲು ಅಥವಾ ಅನುಮೋದಿತ ನಕ್ಷೆಗೆ ಅನುಗುಣವಾಗಿ ಸರಿಪಡಿಸಲು ಪಾಲಿಕೆ ಸೂಚಿಸಿದೆ. ಆದೇಶ ಪಾಲಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಇದೇ ಪ್ರಕರಣದಲ್ಲಿ ತಾಂತ್ರಿಕ ಮೇಲ್ವಿಚಾರಕರ ಮೇಲೂ ಪಾಲಿಕೆ ಬಿಸಿ ಮುಟ್ಟಿಸಿದೆ.

ಮಂಜೂರಾದ ನಕ್ಷೆ, ಕಟ್ಟಡ ಉಪನಿಯಮಗಳು ಅಥವಾ ಝೋನಿಂಗ್ ನಿಯಮಾವಳಿ ಉಲ್ಲಂಘನೆ ಕಂಡುಬಂದರೆ ಮೂರು ದಿನಗಳೊಳಗೆ ಪಾಲಿಕೆಗೆ ವರದಿ ಮಾಡುತ್ತೇನೆ ಎಂದು ಅವರು ಸುಪರ್ವಿಷನ್ ಬಾಂಡ್ನಲ್ಲಿ ಭರವಸೆ ನೀಡಿದ್ದರು. ಆದರೆ, ಉಲ್ಲಂಘನೆ ಕಂಡರೂ ಯಾವುದೇ ವರದಿ ಸಲ್ಲಿಸಿಲ್ಲ ಎಂದು ನೋಟಿಸ್ನಲ್ಲಿ ಆಕ್ಷೇಪಿಸಲಾಗಿದೆ.
ಅದಕ್ಕಾಗಿ, ಕಟ್ಟಡ ಪರವಾನಿಗೆ ಅರ್ಜಿಗಳನ್ನು ಸಲ್ಲಿಸಲು ಹಾಗೂ ಮೇಲ್ವಿಚಾರಣೆ ಕೈಗೊಳ್ಳಲು ನೀಡಿರುವ ಲೈಸೆನ್ಸ್ ಅನ್ನು ಏಕೆ ಅಮಾನತುಪಡಿಸಬಾರದು ಅಥವಾ ರದ್ದುಪಡಿಸಬಾರದು? ಎಂದು ಪ್ರಶ್ನಿಸಿ ಮೂರು ದಿನಗಳಲ್ಲಿ ಲಿಖಿತ ಸ್ಪಷ್ಟನೆ ಕೇಳಲಾಗಿದೆ.
ಕಟ್ಟಡ ಸಂಬಂಧಿಸಿದವರಿಗೂ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ–1976ರ ಕಲಂ 443(4) ಅನ್ವಯ ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಉತ್ತರ ಕೇಳಲಾಗಿದೆ.

ಪ್ರಶ್ನೆ ಈಗ ಒಂದೇ: ನೋಟಿಸ್ ನಂತರ ಕ್ರಮವೇನು?
ನಗರದಲ್ಲಿ ಕಟ್ಟಡ ಪರವಾನಿಗೆ ಪಡೆದು ನಂತರ ನಕ್ಷೆ ಮೀರಿ ಕಾಮಗಾರಿ ನಡೆಸುವ ಪ್ರವೃತ್ತಿ ಹೊಸದಲ್ಲ. ಆದರೆ, ಅನಗೋಳ ಕ್ರಾಸ್ ಪ್ರಕರಣದಲ್ಲಿ ಪಾಲಿಕೆ ನೋಟಿಸ್ ಜಾರಿ ಮಾಡಿರುವುದು ಮಹತ್ವದ ಬೆಳವಣಿಗೆ. ಇದು ಕೇವಲ ಕಾಗದದ ನೋಟಿಸ್ ಆಗಿ ಉಳಿಯುತ್ತದೆಯೇ? ಅಥವಾ ನಿಯಮ ಮೀರುವ ಕಟ್ಟಡ ಮಾಫಿಯಾಗೆ ನಿಜವಾದ ಕಡಿವಾಣ ಬೀಳುತ್ತದೆಯೇ?
ಇ–ಬೆಳಗಾವಿ ಎತ್ತಿದ ಪ್ರಶ್ನೆಗೆ ಈಗ ಪಾಲಿಕೆ ನೋಟಿಸ್ ಮೂಲಕ ಉತ್ತರಿಸಿದೆ. ಆದರೆ, ಸಾರ್ವಜನಿಕರ ಪ್ರಶ್ನೆ ಇನ್ನೂ ಬಾಕಿ ಇದೆ — ‘ತೆರವು ಕ್ರಮ ಯಾವಾಗ?’

