
ಮೇಯರ್‌ಗೆ ‘ಪ್ರೀತಿ’ ಫಾರ್ಮುಲಾ?
ಉಪಮೇಯರ್‌ಗೆ ‘ಸಂತೋಷ’ ಲೆಕ್ಕಾಚಾರ?
ಅಥವಾ ಬಿಜೆಪಿಯಲ್ಲಿ ಕೊನೆಯ ಕ್ಷಣದ ಸರ್ಪ್ರೈಸ್?
ಉಪಮೇಯರ್ ಪಟ್ಟಕ್ಕೆ ‘ಸಂತೋಷ’ ಮುನ್ನಡೆ?
ಕೋರ್ ಕಮಿಟಿಯ ಕೊನೆಯ ಮಾತೇ ಅಂತಿಮ.
ಬಿಜೆಪಿಯಲ್ಲಿ ಒಳಸಮೀಕರಣದ ಕೊನೆಯ ಘಟ್ಟ
ebelagavi SPL Report
ಬೆಳಗಾವಿ ಮಹಾನಗರ ಪಾಲಿಕೆಯ ರಾಜಕೀಯ ತಾಪಮಾನ ಇದೀಗ ತಾರಕಕ್ಕೇರಿದೆ. ಬುಧವಾರ ನಡೆಯಲಿರುವ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮುನ್ನ, ಆಡಳಿತಾರೂಢ ಬಿಜೆಪಿಯಲ್ಲಿ ಅಂತಿಮ ಹಂತದ ಚರ್ಚೆಗಳು ಜೋರಾಗಿವೆ.
ಬುಧವಾರ ನಡೆಯಲಿರುವ ಕೋರ್ ಕಮಿಟಿ ಸಭೆಯೇ ಈ ರಾಜಕೀಯ ಕುತೂಹಲಕ್ಕೆ ತೆರೆ ಎಳೆಯುವ ವೇದಿಕೆಯಾಗಿದ್ದು, ಪಕ್ಷದೊಳಗಿನ ಎಲ್ಲ ಲೆಕ್ಕಾಚಾರಗಳು ಈಗ ಅಲ್ಲಿ ಬಂದು ನಿಂತಿವೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ, ಏಳು ಮಂದಿ ಆಕಾಂಕ್ಷಿಗಳ ನಡುವಿನ ಪೈಪೋಟಿ ತೀವ್ರವಾಗಿದೆ.

ಆದರೆ ಒಳರಾಜಕೀಯದ ಸೂಚನೆಗಳು ಈ ಬಾರಿ ಸಮುದಾಯ ಪ್ರತಿನಿಧಿತ್ವದ ಕಾರ್ಡ್ ಹೆಚ್ಚು ತೂಕ ಪಡೆಯಬಹುದು ಎಂಬುದನ್ನು ತೋರಿಸುತ್ತಿವೆ.
ಕೆಲವು ತಿಂಗಳುಗಳ ಹಿಂದೆ ನೇಕಾರ ಸಮುದಾಯಕ್ಕೆ ಮೇಯರ್ ಪಟ್ಟ ನೀಡುವ ಭರವಸೆ ರಾಜಕೀಯವಾಗಿ ಕೇಳಿಬಂದ ಹಿನ್ನೆಲೆ, ಈ ಬಾರಿ ಆ ಸಮುದಾಯದತ್ತ ಒಲವು ತಿರುಗಿದೆ ಎನ್ನಲಾಗುತ್ತಿದೆ.

ಹೀಗಾಗಿ ಪ್ರೀತಿ ಕಾಮಕರ ಹೆಸರು ಗಂಭೀರವಾಗಿ ಚರ್ಚೆಯಲ್ಲಿದೆ.
ಉಪಮೇಯರ್ ಸ್ಥಾನಕ್ಕೂ ಪೈಪೋಟಿ ಕಡಿಮೆಯಿಲ್ಲ. ಐವರು ಆಕಾಂಕ್ಷಿಗಳ ನಡುವೆಯೂ ಸಂತೋಷ ಪೇಡ್ನೇಕರ ಹೆಸರು ಹೆಚ್ಚು ಪ್ರಾಬಲ್ಯದಿಂದ ಕೇಳಿಬರುತ್ತಿದ್ದು, ಉತ್ತರ ಕ್ಷೇತ್ರದ ಸಮೀಕರಣ ಮತ್ತು ನಾಯಕರ ವಿಶ್ವಾಸ ಇವರ ಪಾಲಿಗೆ ಬಲವಾಗುತ್ತಿದೆ ಎನ್ನಲಾಗುತ್ತಿದೆ.
ಆದರೆ ಕೊನೆಯ ಘಟ್ಟದಲ್ಲಿ ಹನುಮಂತ ಕೊಂಗಾಲಿ, ಶ್ರೇಯಸ್ ನಾಕಾಡಿ ಅಥವಾ ನಿತಿನ್ ಜಾಧವ ಪರವೂ ತಿರುವು ಸಂಭವಿಸಬಹುದೆಂಬ ಚರ್ಚೆ ನಿಂತಿಲ್ಲ.
ಒಟ್ಟಾರೆ, ಇದು ಕೇವಲ ಹುದ್ದೆಗಳ ಆಯ್ಕೆ ಅಲ್ಲ; ಬಿಜೆಪಿಯೊಳಗಿನ ಸಮುದಾಯ ಸಮತೋಲನ, ಉತ್ತರ–ದಕ್ಷಿಣ ರಾಜಕೀಯ ಮತ್ತು ಒಳಗುಂಪುಗಳ ಬಲಪರೀಕ್ಷೆ ಕೂಡ ಹೌದು. ಈಗ ಪ್ರಶ್ನೆ ಒಂದೇ—ಕೊನೆಯ ಮುದ್ರೆ ಯಾರಿಗೆ?

