ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ…!

ಅನಗೋಳ ನಾಕಾ ಬಳಿ ‘ಅಪಾಯದ ಅಗೆತ’:

ಮಣ್ಣು ಕುಸಿದು ಒಬ್ಬರಿಗೆ ಗಾಯ; ಪಕ್ಕದ ಕಟ್ಟಡಗಳ ಜೀವಭದ್ರತೆ ಪ್ರಶ್ನೆ.

ಸುರಕ್ಷತಾ ಕ್ರಮಗಳಿಲ್ಲದೆ ಆಳ ಅಗೆದ ಆರೋಪ |

ಟಿಪಿಓ ಅನುಮತಿ ಪ್ರಕ್ರಿಯೆಯ ಮೇಲೂ ಅನುಮಾನ | ಪಾಲಿಕೆ ತಕ್ಷಣ ಸ್ಥಳ ಪರಿಶೀಲನೆ ನಡೆಸದಿದ್ದರೆ ದೊಡ್ಡ ದುರಂತದ ಭೀತಿ

(Ebelagavi Report)
ಬೆಳಗಾವಿ:
ನಗರದ ಅನಗೋಳ ನಾಕಾ ಸಮೀಪ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಆಳವಾಗಿ ಅಗೆದಿರುವ ಜಾಗ ಈಗ ಕೇವಲ ನಿರ್ಮಾಣ ಕಾಮಗಾರಿಯ ವಿಷಯವಾಗಿ ಉಳಿದಿಲ್ಲ; ಅದು ಪಕ್ಕದ ಕಟ್ಟಡಗಳ ಸ್ಥಿರತೆ, ನಿವಾಸಿಗಳ ಜೀವಭದ್ರತೆ ಮತ್ತು ಮಹಾನಗರ ಪಾಲಿಕೆಯ ಅನುಮತಿ–ಮೇಲ್ವಿಚಾರಣೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಗಂಭೀರ ಪ್ರಕರಣವಾಗಿ ಮಾರ್ಪಟ್ಟಿದೆ.

ನಿರ್ಮಾಣ ಸ್ಥಳದಲ್ಲಿ ಮಣ್ಣು ಕುಸಿದು ಒಬ್ಬರು ಗಾಯಗೊಂಡಿರುವ ಘಟನೆ ನಡೆದಿದ್ದು, ‘ಇದು ಅಪಘಾತವಲ್ಲ; ಮುನ್ನೆಚ್ಚರಿಕೆ ನಿರ್ಲಕ್ಷಿಸಿದ ಪರಿಣಾಮ’ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗಿದೆ. ಆಳದ ಅಗೆತ ನಡೆಸುವಾಗ ಪಕ್ಕದ ಕಟ್ಟಡಗಳಿಗೆ ಯಾವುದೇ ಧಕ್ಕೆಯಾಗದಂತೆ ಶೋರಿಂಗ್, ರಿಟೇನಿಂಗ್ ವಾಲ್, ಬ್ಯಾರಿಕೇಡಿಂಗ್, ಸ್ಲೋಪ್ ಪ್ರೊಟೆಕ್ಷನ್, ಸೈಟ್ ಸೇಫ್ಟಿ ಪ್ಲ್ಯಾನ್ ಮತ್ತು ಅರ್ಹ ಸಿವಿಲ್/ಸ್ಟ್ರಕ್ಚರಲ್ ಎಂಜಿನಿಯರ್ ಮೇಲ್ವಿಚಾರಣೆ ಕಡ್ಡಾಯವಾಗಿರಬೇಕು. ಆದರೆ ಸ್ಥಳದಲ್ಲಿನ ಸ್ಥಿತಿ ನೋಡಿದರೆ, ಈ ಮೂಲಭೂತ ಸುರಕ್ಷತಾ ಕ್ರಮಗಳನ್ನು ಪಾಲಿಸಿರುವರೇ ಎಂಬ ಗಂಭೀರ ಅನುಮಾನ ಮೂಡಿದೆ.


ಪಕ್ಕದ ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿ ಮಣ್ಣು ಸಡಿಲಗೊಂಡಿರುವುದು, ಅಗೆತದ ಅಂಚಿನಲ್ಲೇ ಜನವಸತಿ ಕಟ್ಟಡಗಳು ನಿಂತಿರುವುದು ಹಾಗೂ ಮಣ್ಣಿನ ಪದರಗಳು ಜಾರುತ್ತಿರುವ ಸ್ಥಿತಿ ದೊಡ್ಡ ಅಪಾಯದ ಸೂಚನೆ ನೀಡುತ್ತಿದೆ. ಮಳೆ ಬಂದರೆ ಅಥವಾ ಕಂಪನ ಉಂಟುಮಾಡುವ ಯಂತ್ರೋಪಕರಣಗಳ ಬಳಕೆ ಮುಂದುವರಿದರೆ ಪಕ್ಕದ ಕಟ್ಟಡಕ್ಕೂ ಅಪಾಯ ಎದುರಾಗಬಹುದು ಎಂಬ ಆತಂಕ ನಿವಾಸಿಗಳಲ್ಲಿ ಹೆಚ್ಚಾಗಿದೆ.
ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಮಹಾನಗರ ಪಾಲಿಕೆ ಮತ್ತು ನಗರ ಯೋಜನಾ ವಿಭಾಗವು ಕೇವಲ ನಕ್ಷೆ ಅನುಮೋದನೆಗೆ ಸೀಮಿತವಾಗಿರಲು ಸಾಧ್ಯವಿಲ್ಲ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ, ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ, ಕಟ್ಟಡ ಉಪನಿಯಮಗಳು, ನ್ಯಾಷನಲ್ ಬಿಲ್ಡಿಂಗ್ ಕೋಡ್ ಹಾಗೂ ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿದ ಕಾನೂನುಗಳ ಪ್ರಕಾರ ಜನರ ಜೀವ, ಆಸ್ತಿ ಮತ್ತು ಪಕ್ಕದ ಕಟ್ಟಡಗಳ ಸ್ಥಿರತೆ ಕಾಪಾಡುವುದು ಅನುಮತಿ ನೀಡಿದ ಪ್ರಾಧಿಕಾರದ ಜವಾಬ್ದಾರಿಯೂ ಆಗಿದೆ.
ಮೂಲಗಳ ಪ್ರಕಾರ, ಈ ಕಟ್ಟಡಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೆಲವು ಕಾರಣಗಳನ್ನು ನೀಡಿ ಮೊದಲು ತಿರಸ್ಕರಿಸಲಾಗಿತ್ತು. ಆದರೆ ನಂತರ ಟಿಪಿಓ ವಿಭಾಗದಿಂದಲೇ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಈಗ ಚರ್ಚೆಗೆ ಗ್ರಾಸವಾಗಿದೆ.

ಅರ್ಜಿ ತಿರಸ್ಕಾರದ ಕಾರಣ ಏನು? ನಂತರ ಅದೇ ಪ್ರಸ್ತಾವನೆಗೆ ಅನುಮತಿ ನೀಡಲು ಯಾವ ತಾಂತ್ರಿಕ ಆಧಾರ ತೆಗೆದುಕೊಳ್ಳಲಾಯಿತು? ಪಕ್ಕದ ಕಟ್ಟಡಗಳ ಸ್ಥಿರತೆ ಕುರಿತು ವರದಿ ಪಡೆಯಲಾಗಿತ್ತೇ? ಮಣ್ಣಿನ ಪರೀಕ್ಷೆ, ಅಗೆತದ ಆಳ, ಸುರಕ್ಷತಾ ಯೋಜನೆ ಪರಿಶೀಲಿಸಲಾಗಿತ್ತೇ? ಎಂಬ ಪ್ರಶ್ನೆಗಳಿಗೆ ಪಾಲಿಕೆ ಸ್ಪಷ್ಟ ಉತ್ತರ ನೀಡಬೇಕಾಗಿದೆ.

ಒಬ್ಬರಿಗೆ ಗಾಯವಾಗಿದೆ ಎಂದರೆ ಇದು ಸಣ್ಣ ಘಟನೆ ಅಲ್ಲ. ಇದು ನಾಳೆಯ ದೊಡ್ಡ ದುರಂತದ ಎಚ್ಚರಿಕೆ. ಕುಟುಂಬಗಳು ವಾಸಿಸುವ ಕಟ್ಟಡದ ಪಕ್ಕದಲ್ಲಿ ಇಷ್ಟು ಆಳದ ಅಗೆತ ಮಾಡಿದರೆ ಅಧಿಕಾರಿಗಳು ಕಾಗದದ ಅನುಮತಿಗೆ ಮಾತ್ರ ಸೀಮಿತವಾಗದೆ ಸ್ಥಳಕ್ಕೆ ಬಂದು ಪರಿಶೀಲಿಸಬೇಕು,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಮಹಾನಗರ ಪಾಲಿಕೆ ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿ, ಸ್ವತಂತ್ರ ತಾಂತ್ರಿಕ ಸಮಿತಿಯಿಂದ ಸ್ಥಳ ಪರಿಶೀಲನೆ ನಡೆಸುವುದು ಅಗತ್ಯ. ಪಕ್ಕದ ಕಟ್ಟಡಗಳ ಸ್ಥಿರತೆ ಕುರಿತು ವರದಿ ಬರುವವರೆಗೆ ಕಾಮಗಾರಿ ಮುಂದುವರಿಯಲು ಅವಕಾಶ ನೀಡಬಾರದು. ಸುರಕ್ಷತಾ ನಿಯಮ ಉಲ್ಲಂಘನೆ ಕಂಡುಬಂದರೆ ನಿರ್ಮಾಪಕ, ಗುತ್ತಿಗೆದಾರ, ಮೇಲ್ವಿಚಾರಣಾ ಎಂಜಿನಿಯರ್ ಹಾಗೂ ಅನುಮತಿ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಅನಗೋಳ ನಾಕಾದ ಈ ಅಗೆತ ಬೆಳಗಾವಿಗೆ ಮತ್ತೊಂದು ದುರಂತದ ಮುನ್ನೆಚ್ಚರಿಕೆಯೇ? ಅಥವಾ ಅಧಿಕಾರಿಗಳು ಎಚ್ಚರಗೊಂಡು ಅಪಾಯ ತಪ್ಪಿಸುತ್ತಾರೆಯೇ? ಎಂಬುದು ಈಗ ಪಾಲಿಕೆಯ ತಕ್ಷಣದ ಕ್ರಮದ ಮೇಲೆ ಅವಲಂಬಿತವಾಗಿದೆ.

Leave a Reply

Your email address will not be published. Required fields are marked *

error: Content is protected !!