ಮಟಕಾ‌ ಗಿರಾಕಿ‌ ಗಡಿ ಪಾರ್..!

ಬೆಳಗಾವಿ: ನಗರದಲ್ಲಿ ಮಟಕಾ, ಇಸ್ಪೀಟ್ ಎಲೆಗಳ ಜೂಜಾಟ ಮತ್ತು ಗಾಂಜಾ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸರು ಮತ್ತೊಮ್ಮೆ ಕಠಿಣ ಹೆಜ್ಜೆ ಇಟ್ಟಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುತ್ತ, ಪದೇಪದೇ ಅಪರಾಧಗಳಲ್ಲಿ ತೊಡಗಿದ್ದ ಮೂವರು ರೂಢಿಗತ ಆರೋಪಿಗಳನ್ನು ಜಿಲ್ಲೆಯ ಗಡಿ ದಾಟಿಸಿ ಆರು ತಿಂಗಳ ಅವಧಿಗೆ ಗಡಿಪಾರು ಮಾಡುವ ಆದೇಶ ಜಾರಿಗೊಳಿಸಲಾಗಿದೆ.
ಪೊಲೀಸ್ ಇಲಾಖೆಯ ಪ್ರಕಾರ, ಶಹಾಪೂರದ ಸರ್ಫರಾಜ ಶಬ್ಬಿರಅಹ್ಮದ ಶೇಖ, ತಿಲಕವಾಡಿಯ ಅಯೋಧ್ಯಾ ನಗರದ ವಿನಾಯಕ ಪ್ರಕಾಶ ಕೊಲ್ಲಾಪೂರಿ, ಹಾಗೂ ಶಹಾಪೂರದ ಹೊಸೂರ ಬಸವಣಗಲ್ಲಿಯ ಸಾಗರ ಪಾಂಡುರಂಗ ಸಾಲಗುಡೆ ಇವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಲೇ ಬಂದ ಇವರ ಚಟುವಟಿಕೆಗಳನ್ನು ನಿಯಂತ್ರಿಸಲು ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55 ಮತ್ತು 56ರ ಅಡಿಯಲ್ಲಿ ಗಡಿಪಾರು ಆದೇಶ ಹೊರಡಿಸಲಾಗಿದೆ.
ಇವರಲ್ಲಿ ಸರ್ಫರಾಜ ಶೇಖ ವಿರುದ್ಧ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಟಕಾ, ಇಸ್ಪೀಟ್ ಜೂಜಾಟ ಹಾಗೂ ಇತರೆ ಅಪರಾಧಗಳಿಗೆ ಸಂಬಂಧಿಸಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ವಿನಾಯಕ ಕೊಲ್ಲಾಪೂರಿ ವಿರುದ್ಧ ಗಾಂಜಾ ಮಾರಾಟ ಸೇರಿದಂತೆ 5 ಪ್ರಕರಣಗಳು, ಸಾಗರ ಸಾಲಗುಡೆ ವಿರುದ್ಧ ಇಸ್ಪೀಟ್ ಜೂಜಾಟ ಹಾಗೂ ಇತರೆ ಆರೋಪಗಳಿಗೆ ಸಂಬಂಧಿಸಿದಂತೆ 6 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪದೇಪದೇ ಪ್ರಕರಣಗಳಲ್ಲಿ ಸಿಲುಕುತ್ತಿದ್ದರೂ ತಮ್ಮ ಚಟುವಟಿಕೆ ನಿಲ್ಲಿಸದ ಈ ಆರೋಪಿಗಳಿಂದ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸ್ಥಳೀಯರ ನೆಮ್ಮದಿಗೆ ಧಕ್ಕೆಯಾಗುತ್ತಿದೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ಇದು ಸ್ಪಷ್ಟ ಎಚ್ಚರಿಕೆ ಎಂದೇ ಪೊಲೀಸ್ ವಲಯದಲ್ಲಿ ಹೇಳಲಾಗುತ್ತಿದೆ.
ಮಾ. 17, 2026ರಿಂದ ಜಾರಿಗೆ ಬರುವಂತೆ ಈ ಮೂವರನ್ನೂ ಬೆಳಗಾವಿ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ವಿಜಯಪುರ, ಕಾರವಾರ ಮತ್ತು ಯಾದಗೀರ ಜಿಲ್ಲೆಗಳ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಈ ಅವಧಿಯಲ್ಲಿ ಅವರು ಬೆಳಗಾವಿ ಜಿಲ್ಲೆಯ ಮಿತಿಯೊಳಗೆ ಪ್ರವೇಶಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನಗರದಲ್ಲಿ ಸಾರ್ವಜನಿಕ ನೆಮ್ಮದಿ ಕದಡುವ ಅಕ್ರಮ ಚಟುವಟಿಕೆಗಳ ವಿರುದ್ಧ ಮುಂದೆಯೂ ಇಂತಹ ದಿಟ್ಟ ಕ್ರಮಗಳು ಮುಂದುವರಿಯಲಿವೆ ಎಂಬ ಸಂದೇಶವನ್ನು ಈ ಗಡಿಪಾರು ಆದೇಶ ಮತ್ತೊಮ್ಮೆ ರವಾನಿಸಿದೆ. ಅಪರಾಧಿಗಳಿಗೆ ಬೆಳಗಾವಿ ನಗರ ಸುರಕ್ಷಿತ ತಾಣವಲ್ಲ ಎಂಬುದನ್ನು ಪೊಲೀಸರ ಈ ಕ್ರಮ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!