ಇದು ‘ಸಾವಿನ‌ ಬಾವಿ’

Oplus_16908288

ಕಪಿಲೇಶ್ವರ ಬಾವಿ ಮತ್ತೆ ಮಕ್ಕಳನ್ನು ನುಂಗಿತು!
‘ಖಾಸಗಿ ಜಾಗ’ದ ನೆಪಕ್ಕೆ ಇಬ್ಬರು ಬಾಲಕರ ಪ್ರಾಣವೇ ಬೆಲೆನಾ?

ವರ್ಷಗಳಿಂದ ಬಾಕಿ ಉಳಿದ ಸ್ವಾಧೀನ ಪ್ರಸ್ತಾವನೆ; ಕುಸಿದ ರಕ್ಷಣಾ ಗೋಡೆ, ಕುಸಿದ ಆಡಳಿತದ ಹೊಣೆಗಾರಿಕೆ

ಸಾವಿನ ಬಾವಿ’ ಎಂದು ತಿಳಿದಿದ್ದರೂ ಪಾಲಿಕೆ ಏಕೆ ಮೌನವಾಗಿತ್ತು?

ಬಡ ಮಕ್ಕಳಿಗೆ ಸುರಕ್ಷಿತ ಈಜುಕೊಳ ಕಲ್ಪಿಸುವುದು ನಗರ ಆಡಳಿತದ ಹೊಣೆಗಾರಿಕೆಯಾಗಿಲ್ಲವೇ?.


ಬೆಳಗಾವಿ:
ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಬಾವಿ ಭಾನುವಾರ ಇಬ್ಬರು ಬಾಲಕರ ಜೀವ ಕಸಿದುಕೊಂಡಿದೆ. ಇದು ಕೇವಲ ಮುಳುಗಿ ಸಾವು ಅಲ್ಲ; ನಗರ ಆಡಳಿತದ ನಿರ್ಲಕ್ಷ್ಯ, ಪಾಲಿಕೆಯ ವಿಳಂಬ ನೀತಿ ಮತ್ತು ಸಾರ್ವಜನಿಕ ಸುರಕ್ಷತೆಯ ಮೇಲಿನ ಅಸಡ್ಡೆಗೆ ಬಿದ್ದ ರಕ್ತದ ಮುದ್ರೆ.

Oplus_16908288

ಶಿವಾಜಿ ನಗರದ ಶಿವಂ ಪರಶುರಾಮ ಸುಂಡಿಕರ್‌ (7) ಹಾಗೂ ಪರಶುರಾಮ ರಾಜು ನಿಲಜಕರ (11) ಈ ದುರಂತದಲ್ಲಿ ಮೃತಪಟ್ಟ ಬಾಲಕರು. ರಜೆ ದಿನ ಈಜಲು ಹೋಗಿದ್ದ ಇಬ್ಬರೂ, ಈಜಿನ ನಂತರ ಬಾವಿಯ ರಕ್ಷಣಾ ಗೋಡೆಯ ಮೇಲೆ ಕುಳಿತಿದ್ದರು.

ಆಗ ಗೋಡೆಯ ಒಂದು ಭಾಗ ಏಕಾಏಕಿ ಕುಸಿದು, ಇಬ್ಬರೂ ನೀರಿಗೆ ಬಿದ್ದರು. ಸಹಾಯ ತಲುಪುವಷ್ಟರಲ್ಲಿ ಇಬ್ಬರ ಜೀವ ನೀರಿನ ಆಳದಲ್ಲಿ ಕರಗಿ ಹೋಗಿತ್ತು.
ಖಡೇಬಜಾರ್ ಪೊಲೀಸರು ತರಬೇತಿ ಪಡೆದ ಈಜುಗಾರರ ನೆರವಿನಿಂದ ಶೋಧ ನಡೆಸಿ ಶವಗಳನ್ನು ಹೊರತೆಗೆದರು. ಆದರೆ ಶವಗಳ ಜೊತೆಗೆ ಹೊರಬಂದಿರುವುದು ಎರಡು ಮಕ್ಕಳ ದೇಹಗಳು ಮಾತ್ರವಲ್ಲ; ವರ್ಷಗಳಿಂದ ಮುಚ್ಚಿಟ್ಟಿದ್ದ ಆಡಳಿತದ ನಿರ್ಲಕ್ಷ್ಯದ ಸತ್ಯವೂ ಹೌದು.

ಕಪಿಲೇಶ್ವರ ಬಾವಿ ದೃಶ್ಯ

ಈ ಬಾವಿ ಖಾಸಗಿ ಸ್ವಾಮ್ಯದದ್ದು ಎಂಬುದು ಅಧಿಕಾರಿಗಳ ಹಳೆಯ ಉತ್ತರ. ಆದರೆ ಪ್ರಶ್ನೆ ಒಂದೇ — ಅಪಾಯ ಸಾರ್ವಜನಿಕವಾಗಿದ್ದಾಗ, ಹೊಣೆಗಾರಿಕೆ ಖಾಸಗಿಯಾಗುತ್ತದೆಯೇ?
ಈ ಜಾಗವನ್ನು ಸ್ವಾಧೀನಪಡಿಸಿಕೊಂಡು ಸುರಕ್ಷಿತವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಹಲವು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಾಕಿ ಇದೆ. ಹಣಕಾಸಿನ ಕೊರತೆ, ತಾಂತ್ರಿಕ ಪ್ರಕ್ರಿಯೆ, ಕಡತ ಸಂಚಾರ ಎಂಬ ನೆಪಗಳ ಹಿಂದೆ ಜೀವಗಳ ಬೆಲೆ ಮರೆಯಾಗುತ್ತಲೇ ಬಂದಿದೆ.

ಸ್ಥಳೀಯರ ಪ್ರಕಾರ, ಇದೇ ಬಾವಿಯಲ್ಲಿ ಹಿಂದೆಯೂ ಅಪಘಾತಗಳು, ಮುಳುಗಿ ಸಾವುಗಳು ಸಂಭವಿಸಿವೆ. ಹಾಳಾಗಿದ್ದ ರಕ್ಷಣಾ ಗೋಡೆ ದುರಸ್ತಿ ಮಾಡಬೇಕು, ಎಚ್ಚರಿಕೆ ಫಲಕ ಹಾಕಬೇಕು, ಸುರಕ್ಷತಾ ತಡೆಗೋಡೆ ನಿರ್ಮಿಸಬೇಕು, ಮಕ್ಕಳ ಪ್ರವೇಶ ನಿಯಂತ್ರಿಸಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಪ್ರತಿ ಮನವಿಗೂ ಆಡಳಿತದ ಉತ್ತರ ಮೌನವೇ ಆಗಿತ್ತು. ಇಂದು ಆ ಮೌನವೇ ಎರಡು ಮಕ್ಕಳ ಸಾವಾಗಿ ಮರಳಿ ಬಂದಿದೆ.
ನಗರದಲ್ಲಿ ಬಡ ಹಾಗೂ ಸಾಮಾನ್ಯ ಕುಟುಂಬಗಳ ಮಕ್ಕಳಿಗೆ ಕಡಿಮೆ ವೆಚ್ಚದ ಸುರಕ್ಷಿತ ಈಜುಕೊಳಗಳ ಕೊರತೆ ದುರಂತದ ಮತ್ತೊಂದು ಮುಖ. ಖಾಸಗಿ ಈಜುಕೊಳಗಳ ಶುಲ್ಕ ಗಂಟೆಗೆ ₹100ರಿಂದ ₹200. ಬಡ ಮನೆಯ ಮಕ್ಕಳಿಗೆ ಇದು ಸಾಧ್ಯವಾಗದಾಗ, ಅವರು ಅಪಾಯಕಾರಿ ಬಾವಿ, ಕೆರೆ, ಹಳ್ಳಗಳತ್ತ ಹೋಗುತ್ತಾರೆ. ಅಲ್ಲಿ ಇಲ್ಲ ಮೇಲ್ವಿಚಾರಣೆ, ಇಲ್ಲ ರಕ್ಷಣಾ ಸಿಬ್ಬಂದಿ, ಇಲ್ಲ ಜೀವ ಉಳಿಸುವ ವ್ಯವಸ್ಥೆ.
ಇದು ಪ್ರಕೃತಿಯ ಅವಘಡವಲ್ಲ. ಇದು ನಿರ್ಲಕ್ಷ್ಯದಿಂದ ಹುಟ್ಟಿದ ದುರಂತ.
ಕಪಿಲೇಶ್ವರ ಬಾವಿಯನ್ನು “ಸಾವಿನ ಬಾವಿ” ಎಂದು ಜನರು ವರ್ಷಗಳಿಂದ ಕರೆಯುತ್ತಿದ್ದರೂ, ಆಡಳಿತ ಎಚ್ಚರಗೊಳ್ಳಲಿಲ್ಲ. ಈಗ ಇಬ್ಬರು ಮಕ್ಕಳ ಸಾವಿನ ನಂತರವಾದರೂ ಪಾಲಿಕೆ ಕಣ್ಣು ತೆರೆಯುತ್ತದೆಯೇ?
ನಾಗರಿಕರ ಒತ್ತಾಯ ಸ್ಪಷ್ಟವಾಗಿದೆ: ಬಾವಿ ಆವರಣವನ್ನು ತಕ್ಷಣ ಸ್ವಾಧೀನಪಡಿಸಿಕೊಳ್ಳಬೇಕು. ಸುರಕ್ಷತಾ ಗೋಡೆ, ಎಚ್ಚರಿಕೆ ಫಲಕ, ಪ್ರವೇಶ ನಿಯಂತ್ರಣ, ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ, ಮುಂದಿನ ದುರಂತಕ್ಕೂ ಇಂದಿನಂತೆ “ವಿಚಾರಣೆ ನಡೆಸಲಾಗುವುದು” ಎನ್ನುವ ಖಾಲಿ ಹೇಳಿಕೆ ಮಾತ್ರ ಉಳಿಯಲಿದೆ.

ಖಾಸಗಿ ಸ್ವಾಮ್ಯದ ನೆಪದಲ್ಲಿ ಸಾರ್ವಜನಿಕ ಅಪಾಯವನ್ನು ನಿರ್ಲಕ್ಷಿಸಬಹುದೇ?

ಸ್ವಾಧೀನ ಪ್ರಸ್ತಾವನೆ ವರ್ಷಗಳಿಂದ ಕಡತದಲ್ಲೇ ಏಕೆ ಸಿಲುಕಿದೆ?

ರಕ್ಷಣಾ ಗೋಡೆ ಕುಸಿಯುವಷ್ಟರ ಮಟ್ಟಿಗೆ ನಿರ್ವಹಣೆ ಯಾರು ಮಾಡಲಿಲ್ಲ?

Leave a Reply

Your email address will not be published. Required fields are marked *

error: Content is protected !!