Headlines

ಪುಟ್ಟ ಕಂದನ ನಗುವಿಗೂ ಬಹಿಷ್ಕಾರದ ಬೇಲಿ!

ಬೆಳಗಾವಿ:
ಐದು ವರ್ಷದ ಮಗು ಊರಿನ ರಾಜಕೀಯ ತಿಳಿದಿರುವುದಿಲ್ಲ. ಪಂಚರ ಫರ್ಮಾನು ಅರ್ಥವಾಗುವುದಿಲ್ಲ. ದಂಡ, ಬಹುಮಾನ, ಬಹಿಷ್ಕಾರ ಎಂಬ ಪದಗಳ ಕ್ರೌರ್ಯ ಅದಕ್ಕೆ ಗೊತ್ತಿಲ್ಲ. ಅದಕ್ಕೆ ಗೊತ್ತಿರುವುದು ಒಂದೇ—ಮನೆಯ ಮುಂದೆ ಆಟವಾಡುವ ಅಂಗಳ, ಗೆಳೆಯರ ನಗು, ಮಣ್ಣಿನಲ್ಲಿ ಕಟ್ಟುವ ಆಟದ ಮನೆ.
ಆದರೆ ಕೊಂಡಸಕೊಪ್ಪದಲ್ಲಿ ಆ ಪುಟ್ಟ ಕಂದನ ಆಟಕ್ಕೂ, ನಗುವಿಗೂ, ಗೆಳೆತನಕ್ಕೂ ಬಹಿಷ್ಕಾರದ ಬೀಗ ಹಾಕಲಾಗಿದೆ ಎಂಬ ಆರೋಪ ಮನಸ್ಸು ಕಲುಕುವಂತಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕ್ಷೇತ್ರ ವ್ಯಾಪ್ತಿಯ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದ ಕುಟುಂಬವೊಂದರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕುಟುಂಬದವರೊಂದಿಗೆ ಮಾತನಾಡಿದರೆ ₹5 ಸಾವಿರ ದಂಡ, ಅವರ ಬಗ್ಗೆ ಮಾಹಿತಿ ಕೊಟ್ಟರೆ ₹1 ಸಾವಿರ ಬಹುಮಾನ ಎಂಬ ಅಮಾನವೀಯ ಸೂಚನೆ ಹರಡಿಸಲಾಗಿದೆ ಎಂದು ಕುಟುಂಬ ಅಳಲು ತೋಡಿಕೊಂಡಿದೆ.

ಇದು ಕೇವಲ ದೊಡ್ಡವರ ಜಗಳವಲ್ಲ. ಈ ಬಹಿಷ್ಕಾರದ ವಿಷ ಈಗ ಪುಟ್ಟ ಮಗುವಿನ ಬಾಲ್ಯವನ್ನೇ ತಟ್ಟಿದೆ. “ನಮ್ಮ ಮಗುವಿನ ಜೊತೆ ಯಾರೂ ಮಾತನಾಡುವುದಿಲ್ಲ. ಮಕ್ಕಳು ಆಟವಾಡಲು ಹೆದರುತ್ತಿದ್ದಾರೆ. ನಮ್ಮನ್ನು ಕಂಡರೆ ಜನ ದೂರ ಸರಿಯುತ್ತಿದ್ದಾರೆ” ಎಂಬ ಕುಟುಂಬದ ನೋವು ಹೃದಯ ಹಿಂಡುವಂತಿದೆ.
ಬಹಿಷ್ಕಾರದ ಮಧ್ಯೆ ತಡರಾತ್ರಿ ಮನೆಯ ಮೇಲೆ ಕಲ್ಲು ತೂರಾಟ ನಡೆದಿರುವುದು ಪ್ರಕರಣವನ್ನು ಮತ್ತಷ್ಟು ಭಯಾನಕಗೊಳಿಸಿದೆ. ಕಿಟಕಿಯ ಗಾಜು ಒಡೆದು ಚೂರುಗಳು ಬೆಡ್ ಮೇಲೆ ಬಿದ್ದಿವೆ. ಆ ಕ್ಷಣದಲ್ಲಿ ಯಾರಾದರೂ ಅಲ್ಲಿ ಇದ್ದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆ ಕುಟುಂಬವನ್ನು ನಿದ್ದೆಯಿಲ್ಲದ ರಾತ್ರಿಗಳಿಗೆ ತಳ್ಳಿದೆ.
ಹಿರೇಬಾಗೇವಾಡಿ ಪೊಲೀಸರಿಗೆ ದೂರು ನೀಡಿದರೂ ಹದಿನೈದು ದಿನಗಳಿಂದ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಗಂಭೀರ. ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ಮನೆ ಮೇಲೆ ದಾಳಿ—ಇವು ಸಾಮಾನ್ಯ ದೂರುಗಳಲ್ಲ. ಇದು ಸಂವಿಧಾನದ ಗೌರವ, ಮಾನವೀಯತೆ ಮತ್ತು ಕಾನೂನು ಪ್ರಭುತ್ವಕ್ಕೆ ಹಾಕಿದ ಸವಾಲು.
ಪುಟ್ಟ ಮಗುವಿನ ಕಣ್ಣೀರಿಗಾದರೂ ಪೊಲೀಸರು ಎಚ್ಚರಗೊಳ್ಳುವರೇ?
ಅಥವಾ ಕೊಂಡಸಕೊಪ್ಪದ ಈ ಅಮಾನವೀಯತೆ ಮೌನದಲ್ಲೇ ಮುಚ್ಚಿಹೋಗುವುದೇ?

Leave a Reply

Your email address will not be published. Required fields are marked *

error: Content is protected !!