ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್: ಸಿಟೀಜ್‌ 2.0ಗೆ ಕಾಟಾಚಾರದ ಸಮಾಲೋಚನೆ?


ಬೆಳಗಾವಿ:

ಇನ್ನೂ ಸಭೆಯೇ ನಡೆದಿಲ್ಲ. ಆದರೆ ಅದರ ಕಾರ್ಯವಿವರದ ಕರಡು ಈಗಾಗಲೇ ಸಿದ್ಧವಾಗಿದೆ. ಈ ಒಂದು ಸಂಗತಿಯೇ ಬೆಳಗಾವಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನ ಹುಟ್ಟಿಸುವಂತಾಗಿದೆ. ಮಾರ್ಚ್‌ 23ರಂದು ಸಿಟೀಜ್‌ 2.0 ಯೋಜನೆ ಕುರಿತು ಸ್ಟೇಕ್‌ಹೋಲ್ಡರ್‌ ಸಭೆ ನಿಗದಿಯಾಗಿದೆ.

ಆದರೆ, ಸಭೆಗೆ ಮುನ್ನವೇ ಪ್ರೊಸಿಡಿಂಗ್ಸ್‌ ಸಿದ್ಧವಾಗಿರುವುದು ನೈಜ ಸಮಾಲೋಚನೆಗಿಂತ ಕಾಗದದ ಪ್ರಕ್ರಿಯೆಗೂ ಹೆಚ್ಚು ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ.
ಲಭ್ಯವಾದ ಕರಡು ದಾಖಲೆಯ ಪ್ರಕಾರ, ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಭಾಗವಹಿಸುವ ಅಧಿಕಾರಿಗಳ ವಿವರಗಳನ್ನು ಮೊದಲೇ ನಮೂದಿಸಲಾಗಿದೆ. ಇದಲ್ಲದೆ, “ವ್ಯವಸ್ಥಾಪಕ ನಿರ್ದೇಶಕರು ಸಭೆಯನ್ನುದ್ದೇಶಿಸಿ ಮಾತನಾಡಿದರು”, “ಯೋಜನೆಯ ಉದ್ದೇಶ ವಿವರಿಸಲಾಯಿತು”, “ಹಿತಾಸಕ್ತಿದಾರರಿಗೆ ಮಾಹಿತಿ ನೀಡಲಾಯಿತು” ಎಂಬ ವಾಕ್ಯಗಳೂ ಪೂರ್ವಭಾವಿಯಾಗಿಯೇ ದಾಖಲಾಗಿವೆ. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಹಿತಾಸಕ್ತಿದಾರರ ಹೆಸರುಗಳ ಪಟ್ಟಿಯೇ ಇನ್ನೂ ಖಾಲಿಯಾಗಿದೆ.
ಸಿಟೀಜ್‌ 2.0 ಮಾರ್ಗಸೂಚಿಗಳ ಪ್ರಕಾರ, ತ್ಯಾಜ್ಯ ನಿರ್ವಹಣೆ, ವಲಯಾಕಾರ ಆರ್ಥಿಕತೆ, ಹವಾಮಾನ ಸ್ನೇಹಿ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಹೂಡಿಕೆ ವಿಷಯಗಳಲ್ಲಿ ನಾಗರಿಕರು, ತಜ್ಞರು ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಸಮಗ್ರ ಸಮಾಲೋಚನೆ ಕಡ್ಡಾಯ. ಆದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕ್ರಮ ನೋಡಿದರೆ, ಮೊದಲು ನಿರ್ಧಾರ ಮಾಡಿ ನಂತರ ಸಭೆ ನಡೆಸುವ ಪದ್ಧತಿ ಅನುಸರಿಸಲಾಗುತ್ತಿರುವ ಶಂಕೆ ಮೂಡಿದೆ.

ಸಭೆಯ ಅರ್ಥವೇ ಅಭಿಪ್ರಾಯ ಕೇಳುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಅಸಮ್ಮತಿಗೂ ಅವಕಾಶ ಕೊಡುವುದು. ಆದರೆ ಸಭೆಗೆ ಮೊನ್ನೆಯೇ ಅದರ ಕಥೆ ಬರೆಯಲ್ಪಟ್ಟಿದ್ದರೆ, ಜನರ ಅಭಿಪ್ರಾಯಕ್ಕೆ ನಿಜವಾಗಿಯೂ ಮೌಲ್ಯ ಸಿಗುತ್ತದೆಯೇ ಎಂಬ ಪ್ರಶ್ನೆ ಸಹಜ. ಹೀಗಾಗಿ ಸಿಟೀಜ್‌ 2.0 ಪ್ರಕ್ರಿಯೆ ಪಾರದರ್ಶಕವಾಗಿದೆಯೇ ಅಥವಾ ಕೇವಲ ದಾಖಲೆ ಪೂರೈಸುವ ಆಡಳಿತವ್ಯವಸ್ಥೆಯೋ ಎಂಬುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡುವುದು ಅನಿವಾರ್ಯವಾಗಿದೆ.

Leave a Reply

Your email address will not be published. Required fields are marked *

error: Content is protected !!